ಚಿಕ್ಕಮಗಳೂರು ಮೂಲದ ಪ್ರತಿಭೆ ಶಿವಾನಿ ನವೀನ್ ಸರಿಗಮಪ ತಮಿಳು ಸೀಸನ್- 5 ಫೈನಾಲೆ ಹಂತಕ್ಕೆ ಏರಿದ್ದರು. ಕನ್ನಡದ ಹುಡುಗಿ ಟ್ರೋಫೀ ಗೆದ್ದು ಬರಲಿ ಎಂದು ಸಂಗೀತ ಪ್ರೇಮಿಗಳು ಹಾರೈಸಿದ್ದರು. ಆದರೆ ಅಂತಿಮ ಘಟ್ಟದಲ್ಲಿ ಶಿವಾನಿಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಗಾಯಕಿ ಸುಸಂತಿಕಾ ಜಯಚಂದ್ರನ್ ಗೆಲುವಿನ ನಗೆ ಬೀರಿದ್ದಾರೆ. ಗ್ರ್ಯಾಂಡ್ ಆಡಿಷನ್ ವೇಳೆ ಕನ್ನಡದ ಹಾಡು ಹಾಡಿ ಶಿವಾನಿ ಮೋಡಿ ಮಾಡಿದ್ದರು. ‘ಸೋಜುಗದ ಸೂಜುಮಲ್ಲಿಗೆ’ ಹಾಡಿನ ಗಾಯನದ ಮೂಲಕ ತಮಿಳು ಸಂಗೀತ ಪ್ರೇಮಿಗಳ ಮನಸೂರೆ ಮಾಡಿದ್ದರು. ಆಕೆಯ ಗಾಯನ ಕಂಡು ನಟ ಧನುಷ್ ಕೂಡ ಅವಕಾಶ ಕೊಡುವುದಾಗಿ ಹೇಳಿದ್ದರು. ಬಳಿಕ ಸಾಕಷ್ಟು ಅದ್ಭುತ ಪರ್ಫಾರ್ಮನ್ಸ್ಗಳ ಮೂಲಕ ಶಿವಾನಿ ತಮಿಳು ಸರಿಗಮಪ ಸೀಸನ್- 5 ಟೈಟಲ್ ಗೆಲ್ಲುವ ಭರವಸೆ ಮೂಡಿಸಿದ್ದರು. 5ನೇ ಫೈನಲಿಸ್ಟ್ ಆಗಿ ಅಂತಿಮ ಘಟ್ಟ ತಲುಪಿದ್ದರು. ಆದರೆ ವಿಜಯಮಾಲೆ ಸಿಗಲಿಲ್ಲ.
‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋ
‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋನಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ಶಿವಾನಿ ಆರಂಭದಿಂದಲೂ ಅಲ್ಲಿನ ವೀಕ್ಷಕರ ಗಮನಸೆಳೆದುಕೊಂಡೇ ಬಂದರು. ಪ್ರತಿಬಾರಿಯೂ ತಮ್ಮ ಕಂಠಸಿರಿಯಿಂದ ಸಂಗೀತಪ್ರಿಯರ ಮನಗೆದ್ದರು. ‘ಸರಿಗಮಪ ಸೀನಿಯರ್ಸ್ ಸೀಸನ್ 5’ ಶೋ ಕಳೆದ ಮೇ 24ರಿಂದ ಆರಂಭವಾಗಿದ್ದು, ಮೆಗಾ ಆಡಿಷನ್ ರೌಂಡ್ನಲ್ಲಿ ತಮಿಳಿನ ‘ವಾಗೈ ಸೂಡ ವಾ’ ಸಿನಿಮಾದ ‘ಪೋರಾನೇ ಪೋರಾನೇ’ ಹಾಡನ್ನು ಶಿವಾನಿ ಹಾಡಿದ್ದರು. ಅಂದು ಆ ಹಾಡಿಗೆ ಜಡ್ಜ್ಗಳಾದ ಶ್ರೀನಿವಾಸ್, ಶ್ವೇತಾ ಮೋಹನ್, ಟಿ. ರಾಜೇಂದರ್ ತಲೆದೂಗಿದ್ದರು. ನಂತರ ಅದೇ ವೇದಿಕೆಯಲ್ಲಿ ‘ಸೋಜುಗದ ಸೂಜು ಮಲ್ಲಿಗೆ’ ಹಾಡನ್ನು ಹಾಡುವಂತೆ ಶಿವಾನಿಗೆ ವಿಜಯ್ ಪ್ರಕಾಶ್ ಸೂಚಿಸಿದ್ದರು.
ಯಾವಾಗ ಫಿನಾಲೆ ನಡೆಯಿತು
ನವೆಂಬರ್ 23 ರಂದು ನಡೆದ ಲೈವ್ ಫಿನಾಲೆಯಲ್ಲಿ, ಆರು ಸ್ಪರ್ಧಿಗಳು – ಸುಸಂತಿಕಾ, ಸಬೇಷನ್, ಸೆಂಥಮಿಳನ್, ಪವಿತ್ರ, ಶ್ರೀಹರಿ ಮತ್ತು ಶಿವಾನಿ – ಕರ್ನಾಟಕ ಸಂಗೀತ, ಮಾಧುರ್ಯ ಮತ್ತು ಪಾಶ್ಚಾತ್ಯ ಸಂಗೀತ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಹಾಡಿದರು.
ಈ ಫಿನಾಲೆಯಲ್ಲಿ, ಸಬೇಶನ್, ಶ್ರೀಹರಿ, ಸೆಂಥಮಿಳನ್, ಪವಿತ್ರ, ಸುಸಂತಿಕಾ ಮತ್ತು ಶಿವಾನಿ ಆರು ಸ್ಪರ್ಧಿಗಳು ಸ್ಪರ್ಧಿಸಿದರು. ಅಂತಿಮ ಸುತ್ತಿನಲ್ಲಿ ಎರಡು ಹಾಡುಗಳನ್ನು ಹಾಡಿದರು. ಅಂಕ ಮತ್ತು ಜನರು ನೀಡಿದ ವೋಟ್ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಯಿತು. ಸಂಗೀತ ಸಂಯೋಜಕರಾದ ದೇವಾ ಮತ್ತು ಗಂಗೈ ಅಮರನ್ ಜೊತೆಗೆ, ನಟ ವಿಶಾಲ್ ಕೂಡ ಈ ಫಿನಾಲೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಯಾರೆಲ್ಲ ಎಷ್ಟನೇ ಸ್ಥಾನ?
ಸಬೇಶನ್ ಈ ಕಾರ್ಯಕ್ರಮದಲ್ಲಿ ಗೆಲ್ಲುವ ನಿರೀಕ್ಷೆಯಿದ್ದರೂ, ಸುಸಂತಿಕಾ ಅವರನ್ನು ಪ್ರಶಸ್ತಿ ವಿಜೇತೆ ಎಂದು ಘೋಷಿಸಲಾಯಿತು. ನಂತರ ಸಬೇಶನ್ ಎರಡನೇ ಸ್ಥಾನ ಪಡೆದರು. ಚಿನ್ನು ಸೆಂಥಮಿಳನ್ ಮೂರನೇ ಸ್ಥಾನ ಪಡೆದರು. ಇದಲ್ಲದೆ, ಸೀಸನ್ನ ಹೆಚ್ಚು ಚರ್ಚೆಗೆ ಗ್ರಾಸವಾದ ಸ್ಪರ್ಧಿ ಪವಿತ್ರಾ ಗೋಲ್ಡನ್ ವಾಯ್ಸ್ ಪ್ರಶಸ್ತಿಯನ್ನು ಸಹ ಗೆದ್ದರು. ಶ್ರೀಹರಿ ಮತ್ತು ಶಿವಾನಿಗೆ ವಿಶೇಷ ಬಹುಮಾನಗಳನ್ನು ನೀಡಲಾಯಿತು.
ಬಹುಮಾನ ಏನು?
ಸಂಗೀತ ಸಂಯೋಜಕ ದೇವಾ ಸ್ವತಃ ವಿಜೇತರಿಗೆ ಬಹುಮಾನಗಳನ್ನು ನೀಡಿದರು. ಅದರಂತೆ, ಪ್ರಶಸ್ತಿ ಗೆದ್ದ ಸುಸಂತಿಕಾಗೆ 60 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಯಿತು. ಎರಡನೇ ಸ್ಥಾನ ಪಡೆದ ಸಬೇಸನ್ಗೆ 10 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ಮೂರನೇ ಸ್ಥಾನ ಪಡೆದ ಚಿನ್ನು ಸೆಂತಮಿಳ್ಗೆ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಯಿತು. ಅದೇ ರೀತಿ, ಗೋಲ್ಡನ್ ವಾಯ್ಸ್ ಆಗಿ ಆಯ್ಕೆಯಾದ ಪವಿತ್ರಾಗೆ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಯಿತು.

Leave a Comment