ರೆಬಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ 7 ವರ್ಷಗಳಾಗಿವೆ. ಈ 7 ವರ್ಷದಲ್ಲಿ ಸುಮಲತಾ ಅವರ ವ್ಯೆಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ ಹಲವು ಬದಲಾವಣೆಗಳಾಗಿವೆ. ಕುಂತರೂ .. ನಿಂತರೂ .. ಸೋತರೂ .. ಗೆದ್ದರೂ .. ಮಂಡ್ಯದಲ್ಲೇ ಎಂದು ಹೇಳುವ ಸುಮಲತಾ ಅಂಬರೀಶ್ ಈಗ ಕೇವಲ ಚಿತ್ರರಂಗದ ಹಿರಿಯ ನಾಯಕಿ ಮಾತ್ರವಲ್ಲ. ಮಾಜಿ ಸಂಸದೆ ಕೂಡ ಹೌದು. ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆಯನ್ನು ಕೂಡ ಅದ್ಧೂರಿಯಾಗಿ ಸುಮಲತಾ ಮಾಡಿದ್ದಾರೆ. ಆದರೆ .. ಇದೇ ಸಮಯದಲ್ಲಿ ತಮ್ಮ ದತ್ತು ಪುತ್ರನ ಪ್ರೀತಿಯಿಂದ ಕೂಡ ವಂಚಿತರಾಗಿದ್ದಾರೆ. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಮದರ್ ಇಂಡಿಯಾ ಮತ್ತು ದರ್ಶನ್ ಸಂಬಂಧ ಹಳಸಿದೆ. ಇದಕ್ಕೆ ಪುರಾವೆ ಎನ್ನುವಂತೆ ಕಳೆದ ಬಾರಿ ಜೈಲಿಂದ ಹೊರ ಬಂದಿದ್ದ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಲತಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ.
ಇನ್ನೂ .. ಈ ಬಾರಿ ದರ್ಶನ್ ಮತ್ತೊಮ್ಮೆ ಜೈಲು ಸೇರಿದ್ದಾರೆ. ಆದರೆ ಇಲ್ಲಿಯವರೆಗೆ ಸುಮಲತಾ ಈ ಕುರಿತು ಮಾತನಾಡಿಲ್ಲ. ಹಿಂದೆ ದರ್ಶನ್ ಹೊರ ಬಂದಾಗ ಕೂಡ ಮನೆ ಮಗನನ್ನು ನೋಡಿಕೊಂಡು ಮಾತನಾಡಿಕೊಂಡು ಬಂದಿಲ್ಲ. ಇವೆಲ್ಲವೂ ಸಾರ್ವತ್ರಿಕ ವಲಯದಲ್ಲಿ ಚರ್ಚೆಗೀಡಾಗಿವೆ. ಹೀಗಿರುವಾಗ ಇದೀಗ ಸುಮಲತಾ ಅಂಬರೀಶ್ ”ಡೆವಿಲ್” ಚಿತ್ರದ ಕುರಿತು ಮಾತನಾಡಿದ್ದಾರೆ. ದರ್ಶನ್‌ಗೆ ಒಳ್ಳೆಯದಾಗಬೇಕು ಎಂದು ಹೇಳಿದ್ದಾರೆ. ಹೌದು, ದರ್ಶನ್ ಅನುಪಸ್ಥಿತಿಯಲ್ಲಿ ”ಡೆವಿಲ್” ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದೇ ಡಿಸೆಂಬರ್ ಹನ್ನೊಂದರಂದು ತೆರೆಗೆ ಬರುತ್ತಿರುವ ಈ ಚಿತ್ರದ ಪ್ರಚಾರದ ಕೆಲಸಕ್ಕೆ ಕೂಡ ಚಾಲನೆ ನೀಡಲಾಗಿದೆ. ಆದರೂ ದರ್ಶನ್ ಹೊರಗಡೆ ಇದ್ದಿದ್ದರೆ ”ಡೆವಿಲ್” ಚಿತ್ರದ ಪ್ರಚಾರದ ರಣತಂತ್ರ ಬೇರೆಯದ್ದೇ ರೀತಿಯಲ್ಲಿ ಇರುತ್ತಿತ್ತು. ಅದರಲ್ಲಿ ಯಾವ ಅನುಮಾನ ಇಲ್ಲ. ಈ ಹಿನ್ನೆಲೆ ಇಂದು (ನವೆಂಬರ್ 24) ಅಂಬರೀಷ್ ಅವರ ಪುಣ್ಯಸ್ಮರಣೆಯ ಹಿನ್ನೆಲೆ ಮಾಧ್ಯಮದವರಿಗೆ ಮುಖಾಮುಖಿಯಾದ ಸುಮಲತಾ ಅವರಿಗೆ ”ಡೆವಿಲ್” ಚಿತ್ರದ ಪ್ರಚಾರದ ಕುರಿತು ಪ್ರಶ್ನೆ ಮಾಡಲಾಗಿದೆ. ದರ್ಶನ್ ಅನುಪಸ್ಥಿತಿಯಿಂದ ಹಿನ್ನೆಡೆಯಾಗುತ್ತಾ ? ಎಂದು ಕೇಳಲಾಗಿದೆ. ಈ ಪ್ರಶ್ನೆಗೆ ಸುಮಲತಾ ಉತ್ತರ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಸುಮಲತಾ ಅಂಬರೀಶ್ ”ಡೆವಿಲ್” ಚಿತ್ರತಂಡದವರ ಪ್ರಚಾರ ವೈಖರಿ ಸರಿಯಾಗಿದೆ ಎಂದು ಹೇಳಿದ್ದಾರೆ. ಸಿನಿಮಾದ ಪ್ರಚಾರಕ್ಕೆ ನಾನು ಯಾವತ್ತು ನೇರವಾಗಿ ಭಾಗವಹಿಸಿಲ್ಲ ಎಂದು ಹೇಳಿರುವ ಸುಮಲತಾ ನಾನು ದರ್ಶನ್ ಅವರ ಹಿತೈಶಿ, ”ಡೆವಿಲ್” ಚಿತ್ರ ಗೆಲ್ಲಬೇಕು, ಯಶಸ್ವಿಯಾಗಬೇಕು ಎಂಬುವುದೇ ನನ್ನ ಹಾರೈಕೆ ಎಂದು ಹೇಳಿದ್ದಾರೆ.
ಮುಂದುವರೆದು ನಡೆದು ಹೋದ ವಿಚಾರದ ಕುರಿತು ಮಾತನಾಡಿ ಈಗ ಪ್ರಯೋಜನ ಇಲ್ಲ ಎಂದು ಹೇಳಿರುವ ಸುಮಲತಾ ಅಂಬರೀಶ್ ಸತ್ಯವನ್ನು ಯಾರು ಕೂಡ ಶಾಶ್ವತವಾಗಿ ಮುಚ್ಚಿಡಲು ಸಾಧ್ಯ ಇಲ್ಲ. ದೇವರಿದ್ದಾನೆ, ಖಂಡಿತ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ. ತುಂಬಾನೇ ಸವಾಲಿನ ಪರಿಸ್ಥಿತಿ ಇದು ಅವರ ಅಭಿಮಾನಿಗಳು ಚಿತ್ರವನ್ನು ನೋಡಲು ಕಾಯುತ್ತಿದ್ದಾರೆ. ನಾವು ಕೂಡ ಕಾಯುತ್ತಿದ್ದೇವೆ ಎಂದು ಹೇಳಿರುವ ಸುಮಲತಾ ಅಂಬರೀಶ್ ದರ್ಶನ್ ಅವರಿಗೆ ಒಳ್ಳೆಯದೇ ಆಗಬೇಕು ಎನ್ನುವುದು ನಮ್ಮೆಲ್ಲರ ಹಾರೈಕೆ ಎಂದು ಹೇಳಿದ್ದಾರೆ.
ಇನ್ನುಳಿದಂತೆ ”ಡೆವಿಲ್” ಚಿತ್ರದ ಮೂರು ಹಾಡುಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮೂರು ಹಾಡುಗಳು ಕೂಡ ದರ್ಶನ್ ಅಭಿಮಾನಿಗಳಿಗೆ ಇಷ್ಟವಾಗಿವೆ. ಪ್ರಕಾಶ್ ವೀರ್ ನಿರ್ದೇಶನದ ಚಿತ್ರದಲ್ಲಿ ರಚನಾ ರೈ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಚಿತ್ರದ ಪ್ರಚಾರದ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.
ಪ್ರತಾಪ್ ಸಿಂಹ ಸಾಥ್
ದರ್ಶನ್ ಅಭಿನಯದ ಡೆವಿಲ್ ಚಿತ್ರದ ಪೋಸ್ಟರ್ ಪ್ರತಾಪ್ ಸಿಂಹ ಕೂಡ ಬಿಡುಗಡೆ ಮಾಡಿದ್ದಾರೆ. ಕನ್ನಡದಲ್ಲಿ ಸಾಕಷ್ಟು ನಟರು ಸ್ಟಾರ್ ಗಳಾಗಿ ಹೊರಹೊಮ್ಮಿದ್ದಾರೆ. ಆದ್ರೆ ಅತೀ ಹೆಚ್ಚು ಫ್ಯಾನ್ಸ್ ಇರೋದು ಒನ್ ಅಂಡ್ ಓನ್ಲಿ ದರ್ಶನ್‌ಗೆ ಮಾತ್ರ. ನಾನು ಮೆಜೆಸ್ಟಿಕ್, ಕರಿಯ ಸಿನಿಮಾಗಳ ಕಾಲದಿಂದಲೂ ಅವರ ಸಿನಿಮಾಗಳನ್ನ ನೋಡುತ್ತಾ ಬಂದಿದ್ದೇನೆ ಎಂದದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ಸಿನಿಮಾವನ್ನು ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ, ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರೇ ಪ್ರಚಾರ ಹೊಣೆ ಹೊತ್ತುಕೊಂಡು ಈಗಾಗಲೇ ದರ್ಶನ್ ಅವರ ಅಭಿಮಾನಿಗಳ ಜೊತೆಗೆ ಸಭೆ ಮಾಡಿದ್ದಾರೆ. “ನನ್ನ ಅಭಿಮಾನಿಗಳು ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ.. ನನ್ನ ಉಳಿದ ಸಿನಿಮಾಗಳಿಗೆ ಅಪಾರ ಪ್ರೀತಿ ನೀಡಿದ್ದೀರಿ. ಆದರೆ, ಡೆವಿಲ್‌ಗೆ ಹೆಚ್ಚು ಪ್ರೀತಿ ಕೊಡಿ ಅಂತ ಅಭಿಮಾನಿಗಳಲ್ಲಿ ದರ್ಶನ್ ಕೇಳಿಕೊಂಡಿದ್ದಾರೆ” ಎಂದು ವಿಜಯಲಕ್ಷ್ಮಿ ಹೇಳಿದ್ದರು.
ದರ್ಶನ್ ತೂಗುದೀಪ ಅವರಿಗೆ ನಾಯಕಿಯಾಗಿ ರಚನಾ ರೈ ಕಾಣಿಸಿಕೊಂಡಿದ್ದು, ಮಹೇಶ್ ಮಾಂಜ್ರೇಕರ್, ಅಚ್ಯುತ್ ಕುಮಾರ್, ಶೋಭರಾಜ್, ಗಿಲ್ಲಿ ನಟ, ಹುಲಿ ಕಾರ್ತಿಕ್, ಶರ್ಮಿಳಾ ಮಾಂಡ್ರೆ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರು ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಹಾಡುಗಳಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಿ ಡೆವಿಲ್ ಗೆಲ್ಲಬೇಕು, ಶುಭ ಹಾರೈಸಿದ ಸುಮಲತಾ ಅಂಬರೀಷ್
by

Leave a Comment