ಜಿಮ್ ಕೋಚ್ ಅರುಣ್ ವೆಂಕಟೇಶ್ ಅವರನ್ನು ʻಅಮೃತವರ್ಷಿಣಿʼ ಧಾರಾವಾಹಿಯ ಖ್ಯಾತಿಯ ನಟಿ ರಜಿನಿ ಅವರು ಇತ್ತೀಚೆಗೆ ಮದುವೆ ಆಗಿದ್ದರು. ದೇಹದಾರ್ಢ್ಯ ಪಟುವಾಗಿರುವ ಅರುಣ್ ಈಚೆಗೆ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಆದರೆ ಅದರಲ್ಲಿ ಅರುಣ್‌ಗೆ ಗೆಲುವು ಸಿಕ್ಕಿಲ್ಲ. ಈ ಬಗ್ಗೆ ಮಾತನಾಡಿರುವ ನಟಿ ರಜಿನಿ, “ಬದುಕನ್ನು ಪ್ರೀತಿಸುತ್ತಾ ಸಾಗಿ, ಬದುಕು ನಮ್ಮನ್ನು ಪ್ರೀತಿಸುತ್ತೆ. ಸೋಲನ್ನು ನಗುತ್ತಾ ಸ್ವಾಗತಿಸಿ ಗೆಲುವು ನಮ್ಮನ್ನು ಸ್ವಾಗತಿಸುತ್ತೆ” ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಹಾರೈಕೆಯೇ ದೊಡ್ಡ ಮೆಡಲ್
ಈ ಕುರಿತು ಒಂದು ಸ್ಪೆಷಲ್ ವಿಡಿಯೋ ಹಂಚಿಕೊಂಡಿರುವ ರಜಿನಿ ಅವರು, “ಸೋಲು ಕೊನೆಯಲ್ಲ.. ಗೆಲುವು ಶಾಶ್ವತವಲ್ಲ.. ಸೋಲು ಗೆಲುವಿನ ನಡುವೆ ನಮ್ಮ ಪ್ರಯತ್ನ ನಿರಂತರ.. ಅರುಣ್‌ಗೆ ಕಾಂಪಿಟೇಷನ್‌ಗೆ ಹಾರೈಸಿದ್ದ ಎಲ್ಲರಿಗೂ ಧನ್ಯವಾದಗಳು. ನನ್ನ ಬೆಬೊಗೆ ಮೆಡಲ್ ಸಿಕ್ಕಿಲ್ಲದೇ ಇರಬಹುದು, ಟ್ರೋಫಿ ಸಿಗದೇ ಇರಬಹುದು. ಆದರೆ ನೀವು ತಿಳಿಸಿದ ಹಾರೈಕೆಗಳು ಯಾವ ಟ್ರೋಫಿ, ಮೆಡಲ್‌ಗಿಂತಲೂ ಏನೂ ಕಮ್ಮಿ ಇರಲಿಲ್ಲ. ಅದು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯತ್ತೆ” ಎಂದು ರಜಿನಿ ಹೇಳಿದ್ದಾರೆ.
ಸೋಲು ನೋಡುತ್ತಿರುವುದು ಇದೇ ಮೊದಲೇನಲ್ಲ
“ಇದು ಬರೀ ಅರುಣ್ ಒಬ್ಬರ ಕಥೆಯಲ್ಲ. ಅಲ್ಲಿ ಬಂದಿದ್ದ ಸಾವಿರಾರು ಅಥ್ಲೆಟ್‌ಗಳ ಕಥೆ. ಉಪ್ಪು ಖಾರ ಇಲ್ಲದೇ ಊಟ ಮಾಡಿದ ದಿನಗಳು, ನಿದ್ದೆ ಇಲ್ಲದ ರಾತ್ರಿಗಳು… ಈ ಒಂದು ದಿನಕ್ಕೆ ಒಂದು ವರ್ಷ ಸಾವು ಬದುಕಿನ ಹೋರಾಟ. ಆದರೆ ಕೊನೆಗೆ ಏನೂ ಇಲ್ಲದೇ ಬರೀಗೈಯಲ್ಲಿ ನಿಲ್ಲುವುದು, ಯಾವ ಶತ್ರುವಿಗೂ ಬೇಡ.. ನನ್ನ ಬೆಬೋ ಬಾಡಿ ಕಂಡೀಷನ್ ಬಹಳ ಚೆನ್ನಾಗಿತ್ತು ಅಂತ ಅವರ ಕೋಚ್ ಕೂಡ ಹೇಳಿದ್ದರು. ನಾವು ಮಾಡುವ ಕೆಲಸ ನಮ್ಮ ಗುರುಗಳಿಗೆ ಇಷ್ಟವಾದರೆ ಅದು ದೇವರಿಗೆ ಇಷ್ಟವಾದಂತೆ ಎಂದು ನನ್ನ ಬೆಬೋ ಕೂಡ ಎಕ್ಸೈಟ್ ಆಗಿದ್ದ. ಆದರೆ ಅದೃಷ್ಟ ಕೈಕೊಟ್ಟಿತ್ತು. ಅವನು ಈ ರೀತಿ ವೇದಿಕೆ ಮೇಲೆ ಸೋಲು ನೋಡುತ್ತಿರುವುದು ಇದೇ ಮೊದಲೇನಲ್ಲ” ಎಂದು ರಜಿನಿ ಅವರು ಹೇಳಿದ್ದಾರೆ.
ಸೋಲು ಕೂಡ ನಮ್ಮೆದುರು ತಲೆ ಬಾಗಬೇಕು
“ಇದನ್ನೆಲ್ಲಾ ಕಂಡಾಗ ದೊಡ್ಡವರು ಹೇಳಿದ ಮಾತೊಂದು ನೆನಪಾಗುತ್ತದೆ. ಅದೇನೆಂದರೆ, ಯಶಸ್ಸಿನ ಹಾದಿಯಲ್ಲಿರುವಾಗ ಏರಿಳಿತಗಳು ಬಹಳ ಮುಖ್ಯ. ಮುಂದಿನ ನಮ್ಮ ಗೆಲುವು ಹೇಗಿರಬೇಕು ಎಂದರೆ ಸೋಲು ಕೂಡ ನಮ್ಮ ಮುಂದೆ ತಲೆ ಬಾಗಬೇಕು. ಆ ರೀತಿ ನಮ್ಮ ಗೆಲುವು ಇರಬೇಕು” ಎಂದು ರಜಿನಿ ಹೇಳಿದ್ದಾರೆ.
ಅಂದಹಾಗೆ, ನಟಿ ರಜಿನಿ ಮತ್ತು ಅರುಣ್ ವೆಂಕಟೇಶ್ ಅವರ ಮದುವೆಯು ನ.10ರಂದು ನಡೆದಿತ್ತು. “7 ವರ್ಷದ ಗೆಳೆಯನ ಜೊತೆ ಸಪ್ತಪದಿ ತುಳಿದು ಈಗ ಒಂದಾದ ಕ್ಷಣ ಜೀವನದ ಅತ್ಯಮೂಲ್ಯದ ದಿನ” ಎಂದು ರಜಿನಿ ಮದುವೆ ಬಗ್ಗೆ ಬರೆದುಕೊಂಡಿದ್ದರು.

Leave a Comment