ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅವರು ಈ ವಾರ ಹೊಸ ಸಿನಿಮಾವೊಂದು ಈ ವಾರ ತೆರೆಗೆ ಬರುತ್ತಿದೆ. ಹೌದು, ಮೇಘಾ ಶೆಟ್ಟಿ ಅಭಿನಯದ ‘ಆಪರೇಷನ್ ಲಂಡನ್ ಕೆಫೆ’ (OLC Movie) ಇದೇ ಶುಕ್ರವಾರ (ನ.28) ತೆರೆಗೆ ಬರುತ್ತಿದ್ದು, ಇದೊಂದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರೂ, ಮೊದಲು ಕನ್ನಡದಲ್ಲಿ ತೆರೆಗೆ ಬರುತ್ತಿದೆ. ಕನ್ನಡ ಮತ್ತು ಮರಾಠಿ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ತಮಿಳು, ತೆಲುಗು ಮತ್ತು ಹಿಂದಿಯಲ್ಲೂ ರಿಲೀಸ್ ಮಾಡುವ ಪ್ಲ್ಯಾನ್ ಚಿತ್ರತಂಡಕ್ಕಿದೆ.
ಬಜಾರಿ ಹುಡುಗಿ ಪಾತ್ರದಲ್ಲಿ ಮೇಘಾ ಶೆಟ್ಟಿ
“ನಾನು ‘ಆಪರೇಷನ್ ಲಂಡನ್ ಕೆಫೆ’ ಚಿತ್ರದಲ್ಲಿ ಬಜಾರಿ ಹುಡುಗಿಯಾಗಿ ನಟಿಸಿದ್ದೇನೆ. ಸಡಗರ ರಾಘವೇಂದ್ರ ಅವರು ತಮ್ಮ ಮೊದಲ ನಿರ್ದೇಶನದಲ್ಲೇ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಕವೀಶ್ ಶೆಟ್ಟಿ ಬರೆದಿರುವ ಕಥೆ ಚೆನ್ನಾಗಿದೆ. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿರುವ ಖುಷಿಯಿದೆ” ಎನ್ನುತ್ತಾರೆ ಮೇಘಾ ಶೆಟ್ಟಿ. ಈ ಆಯೋಜಿಸಿದ್ದ ಈ ಚಿತ್ರದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಚಿತ್ರಕ್ಕಾಗಿ ಡಾ. ವಿ ನಾಗೇಂದ್ರಪ್ರಸಾದ್ ಬರೆದಿರುವ ʼವೆಲ್ಕಮ್ ಟು ಜಂಗಲ್ʼ ಹಾಡನ್ನು ನಿರ್ದೇಶಕ ಶಶಾಂಕ್ ಬಿಡುಗಡೆ ಮಾಡಿ, ಚಿತ್ರಕ್ಕೆ ಯಶಸ್ವಿಯಾಗಲೆಂದು ಹಾರೈಸಿದರು.
ಈ ಚಿತ್ರದಲ್ಲಿ ಕವೀಶ್ ಶೆಟ್ಟಿ ಅವರು ಹೀರೋ ಆಗಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಕಥೆಯನ್ನು ಕೂಡ ಅವರೇ ಬರೆದಿದ್ದಾರೆ. “ನಾನು ಮತ್ತು ನಿರ್ದೇಶಕ ಸಡಗರ ರಾಘವೇಂದ್ರ ಅವರು ʻಮುಂಗಾರು ಮಳೆ 2ʼ ಚಿತ್ರದಲ್ಲಿ ಶಶಾಂಕ್ ಅವರ ಜೊತೆಗೆ ಕಾರ್ಯ ನಿರ್ವಹಿಸಿದ್ದೆವು. ಇದೀಗ ಈ ಚಿತ್ರಕ್ಕೆ ನಾನೇ ಕಥೆ ಬರೆದು, ಹೀರೋ ಆಗಿಯೂ ಕಾಣಿಸಿಕೊಂಡಿದ್ದೇನೆ” ಎಂದು ಕವೀಶ್ ಶೆಟ್ಟಿ ಹೇಳುತ್ತಾರೆ.
ನಿರ್ದೇಶಕರು ಹೇಳಿದ್ದೇನು?
“ಇದು ನನ್ನ ನಿರ್ದೇಶನದ ಮೊದಲ ಚಿತ್ರ. ಈ ಚಿತ್ರದಲ್ಲಿ ಕವೀಶ್ ಶೆಟ್ಟಿ & ಮೇಘಾ ಶೆಟ್ಟಿ ಜೊತೆಗೆ ಮರಾಠಿ ಭಾಷೆಯ ಶಿವಾನಿ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೂ, ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಚೆನ್ನಾಗಿ ಮೂಡಿಬರಲು ಚಿತ್ರತಂಡದ ಸದಸ್ಯರು ಸಹಕಾರ ನೀಡಿದ್ದಾರೆ. ಇದೊಂದು ನಕ್ಸಲಿಸಂ ಬೇಸ್ ಆಗಿಟ್ಟಿಕೊಂಡು ಹೆಣೆದಿರುವ ಕಥೆ. ಹಾಗಂತ ನಕ್ಸಲಿಸಂ ಅನ್ನು ವೈಭವಿಕರಿಸಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗಿದೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿರುವುದು ಈ ಚಿತ್ರದ ವಿಶೇಷ” ಎನ್ನುತ್ತಾರೆ ನಿರ್ದೇಶಕ ಸಡಗರ ರಾಘವೇಂದ್ರ.
ದುಬಾರಿ ವೆಚ್ಚದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ವಿವೇಕ್ ಶೆಟ್ಟಿ ಬಾರ್ಕೂರ್ ಹಾಗೂ ವಿಜಯ್ ಪ್ರಕಾಶ್ ಅವರು ನಿರ್ಮಾಣ ಮಾಡಿದ್ದಾರೆ.

Leave a Comment