ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಕೊಂಡಿ ಕಳಚಿದೆ. ಖ್ಯಾತ ಹಾಸ್ಯನಟ ಉಮೇಶ್ ಇಹಲೋಕ ತ್ಯಜಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟ ಎಂ. ಎಸ್.ಉಮೇಶ್ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಇಂದು (ನ.30) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 80 ವರ್ಷ ವಯಸ್ಸಿನ ಅವರು ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರು ಎಳೆದಿದ್ದಾರೆ. ಇತ್ತೀಚೆಗೆ ಉಮೇಶ್ ಅವರು ಮನೆಯಲ್ಲೇ ಕಾಲು ಜಾರಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಅವರಿಗೆ 4ನೇ ಹಂತದ ಲಿವರ್ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಉಮೇಶ್ ಅವರು 1960ರ ದಶಕದಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚಿನ ದಿನಗಳ ತನಕವೂ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದರು.
ಗುರು ಶಿಷ್ಯರು, ಹಾಲು ಜೇನು, ಅಪೂರ್ವ ಸಂಗಮ ಸೇರಿದಂತೆ ಕನ್ನಡದ ಬಹುತೇಕ ಸ್ಟಾರ್ ನಟರೊಂದಿಗೆ ಹಿಟ್ ಸಿನಿಮಾಗಳಲ್ಲಿ ಉಮೇಶ್ ನಟಿಸಿದ್ದಾರೆ. 350ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಉಮೇಶ್ ಅವರು ತಮ್ಮ ಹಾಸ್ಯದ ಹಾವಭಾವ ಹಾಗೂ “ಅಪಾರ್ಥ ಮಾಡ್ಕೋಬೇಡಿ” ಡೈಲಾಗ್‌ನಿಂದ ಮನೆಮಾತಾಗಿದ್ದರು.
ನಟನಿಗೆ ಕ್ಯಾನ್ಸರ್
ಉಮೇಶ್ ಅವರ ದೇಹದ ಕೆಲ ಭಾಗಕ್ಕೆ ಕ್ಯಾನ್ಸರ್ ಹರಡಿಕೊಂಡಿದ್ದು, ಈ ಕಾರಣ ಸರ್ಜರಿ ಮಾಡುವುದು ಕೂಡ ಕಷ್ಟ ಎಂದು ವೈದ್ಯರು ಹೇಳಿದ್ದರು. ಆದರೆ ಉಮೇಶ್ ಅವರು ನಗುತ್ತಲೇ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು.
ರಾಜ್‌ಕುಮಾರ್ ಅವರ “ಬೊಂಬೆಯಾಟವಯ್ಯಾ” ಹಾಡಿನಲ್ಲೂ ಉಮೇಶ್ ಕಾಣಿಸಿಕೊಂಡಿದ್ದಾರೆ. ಉಮೇಶ್ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಾಸವಾಗಿದ್ದರು. ಎಂಎಸ್ ಉಮೇಶ್ ಅವರ ಪೂರ್ಣ ಹೆಸರು ಮೈಸೂರು ಶ್ರೀಕಂಠಯ್ಯ ಉಮೇಶ್. 1945ರಲ್ಲಿ ಮೈಸೂರಿನಲ್ಲಿ ಜನಿಸಿದ ಉಮೇಶ್ ರಂಗಭೂಮಿ ಮೂಲಕ ನಟನಾ ಕೇತ್ರಕ್ಕೆ ಕಾಲಿಟ್ಟರು.
350 ಚಿತ್ರಗಳಲ್ಲಿ ನಟಿಸಿದ ಕಲಾವಿದ
4ನೇ ವರ್ಷದಲ್ಲಿ ಅವರು ನಾಟಕಗಳಲ್ಲಿ ಅಭಿನಯಿಸತೊಡಗಿದರು. 1960ರಲ್ಲಿ ತೆರೆಕಂಡ ಕನ್ನಡದ ʼಮಕ್ಕಳ ರಾಜ್ಯʼ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಹಾಸ್ಯ ಪಾತ್ರದ ಮೂಲಕ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದ್ದಾರೆ.ಉಮೇಶ್ 60 ವರ್ಷಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ. 1975ರಲ್ಲಿ ತೆರೆಕಂಡ ʼಕಥಾ ಸಂಗಮʼ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ಉಮೇಶ್ ನಟಿಸಿದ ಕೊನೆಯ ಚಿತ್ರ 2023ರಲ್ಲಿ ರಿಲೀಸ್ ಆದ ʼಡೇರ್‌ಡೆವಿಲ್ ಮುಸ್ತಫʼ.

Leave a Comment