ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇನ್ನು 100 ದಿನ ಬಾಕಿಯಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಮತ್ತೊಮ್ಮೆ ರಿಲೀಸ್ ಡೇಟ್ ಕನ್ಫರ್ಮ್ ಮಾಡಿ ಚಿತ್ರತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಜೊತೆಗೆ ಚಿತ್ರದ ತಂತ್ರಜ್ಞರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಶೀಘ್ರದಲ್ಲೇ ಚಿತ್ರದ ಮತ್ತೊಂದು ಟೀಸರ್ ರಿಲೀಸ್ ಆಗಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಚಿತ್ರವನ್ನು ಯಶ್ ತೆರೆಗೆ ತರುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಷಿ, ಕಿಯಾರಾ ಅದ್ವಾನಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಹುಟ್ಟುಹಬ್ಬಕ್ಕೆ ಸಿಗಲಿದೆ ಬಿಗ್ ಅಪ್ಡೇಟ್
ಹೌದು, ಯಶ್ ಅವರಿಗೆ ಜನವರಿ 8ರಂದು ಹುಟ್ಟುಹಬ್ಬ. ಅದೇ ದಿನ ಟಾಕ್ಸಿಕ್ ಸಿನಿಮಾದ ಕಡೆಯಿಂದ ಒಂದು ಬಿಗ್ ಅಪ್ಡೇಟ್ ಸಿಗಲಿದೆ. ಈ ಹಿಂದೆ ಒಂದು ಟೀಸರ್ ರಿಲೀಸ್ ಆಗಿತ್ತು. ಈ ಬಾರಿ ಅದಕ್ಕಿಂತಲೂ ಭಿನ್ನವಾದದನ್ನೇನೋ ನೀಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಟ್ರೇಲರ್ ಅಥವಾ ಮತ್ತೊಂದು ಟೀಸರ್ ಅನ್ನು ಚಿತ್ರತಂಡ ರಿಲೀಸ್ ಮಾಡುವ ಸಾಧ್ಯತೆ ಇದೆ.
ಹೊಸ ಪೋಸ್ಟರ್ ರಿಲೀಸ್
ಚಿತ್ರತಂಡವು ಯಶ್ ಅವರ ತೀವ್ರವಾದ ಅವತಾರವನ್ನು ತೋರಿಸುವ ಹೊಸ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಪೋಸ್ಟರ್‌ನಲ್ಲಿ, ಯಶ್ ರಕ್ತಸಿಕ್ತ ಸ್ನಾನದ ತೊಟ್ಟಿಯಲ್ಲಿ ಮಾದಕ, ಒರಟಾದ ಲುಕ್‌ನಲ್ಲಿ ಮಿಂಚಿದ್ದಾರೆ. ತಮ್ಮ ಬೈಸೆಪ್ಸ್ ತೋರಿಸಿರುವ ಯಶ್, ಮುಖವನ್ನು ಮರೆಮಾಚಿದ್ದಾರೆ. ಅವರ ದೇಹವು ಹಚ್ಚೆಗಳಿಂದ ತುಂಬಿದ್ದು, ಈ ಲುಕ್ ಅನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ಗುಡಿ ಪಾಡ್ವಾ, ಯುಗಾದಿ ಮತ್ತು ಈದ್ ಜೊತೆಗೆ ನಾಲ್ಕು ದಿನಗಳ ರಜಾದಿನವನ್ನು ಗುರಿಯಾಗಿಸಿಕೊಂಡು ಟಾಕ್ಸಿಕ್ ಸಿನಿಮಾವು ಮಾರ್ಚ್ 19ರಂದು ತೆರೆಕಾಣುತ್ತಿದೆ.
ಟಾಕ್ಸಿಕ್ ಚಿತ್ರವನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಇತರ ಭಾಷೆಗಳಲ್ಲಿಯೂ ಡಬ್ ಮಾಡಲಾಗುತ್ತಿದೆ.
ಯಾರೆಲ್ಲಾ ಕೆಲಸ ಮಾಡುತ್ತಿದ್ದಾರೆ?
ಈ ಚಿತ್ರವನ್ನು ಗೀತು ಮೋಹನ್‌ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂಬುದನ್ನು ಹೊರತುಪಡಿಸಿ, ಮಿಕ್ಕ ಮಾಹಿತಿಗಳನ್ನು ಚಿತ್ರತಂಡ ಬಹಿರಂಗಪಡಿಸಿರಲಿಲ್ಲ. ಇದೀಗ ಆ ಕುರಿತ ಹೆಚ್ಚಿನ ಮಾಹಿತಿಗಳು ಗೊತ್ತಾಗಿವೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ರಾಜೀವ್ ರವಿ ಛಾಯಾಗ್ರಹಣವನ್ನು ಮಾಡಿದರೆ, ಕೆಜಿಎಫ್‌ನಲ್ಲಿ ಯಶ್ ಅವರೊಂದಿಗೆ ಕೆಲಸ ಮಾಡಿದ್ದ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಲಾರ್, ಕೆಜಿಎಫ್ ಖ್ಯಾತಿಯ ಉಜ್ವಲ್ ಕುಲಕರ್ಣಿ ಸಂಕಲನವನ್ನು ಮಾಡುತ್ತಿದ್ದಾರೆ. ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಟಿಪಿ ಅಬಿದ್ ವಹಿಸಿಕೊಂಡಿದ್ದು, ಹಾಲಿವುಡ್ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಟಾಕ್ಸಿಕ್‌ನ ಮಹತ್ವದ ಸಾಹಸ ಸನ್ನಿವೇಶಗಳನ್ನು ನಿರ್ದೇಶನ ಮಾಡಿದ್ದಾರೆ.ಹರ್ಷ, ಇಮ್ರಾನ್ ಸರ್ದಾರಿಯಾ, ಗಣೇಶ್ ಆಚಾರ್ಯ ಅವರು ನೃತ್ಯ ನಿರ್ದೇಶನ ಮಾಡುತ್ತಿದ್ದು, ಮೋಹನ್ ಬಿ ಕೆರೆ ಅವರು ಕಲಾ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸುತ್ತಿದ್ದಾರೆ.

Leave a Comment