ಬೆಳಿಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಕುಡಿಯುವುದು ಅಥವಾ ಚಹಾ ಕುಡಿಯುವ ಹವ್ಯಾಸ ಅನೇಕ ಜನರಿಗೆ ಇರುತ್ತದೆ. ಆದರೆ ದಿನದ ಮೊದಲ ಆಹಾರ ದೇಹಕ್ಕೆ ಪೋಷಕವಾಗಿರಬೇಕೇ ಹೊರತು ಹಾನಿಕಾರಕವಾಗಿರಬಾರದು ಎಂಬುದು ತಜ್ಞರ ಸಲಹೆಯಾಗಿದ್ದು, ಇದಕ್ಕಾಗಿ ನೈಸರ್ಗಿಕ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು ದೇಹಕ್ಕೆ ಹೆಚ್ಚು ಲಾಭಕರ ಎನ್ನಲಾಗುತ್ತದೆ.
ಇಂದಿನ ಕೆಟ್ಟ ಆಹಾರ ಪದ್ಧತಿ, ಅನಿಯಮಿತ ಜೀವನಶೈಲಿ, ಅತಿಯಾದ ಜಂಕ್ಫುಡ್ ಸೇವನೆ ಇವುಗಳು ಆರೋಗ್ಯ ಹಾನಿಗೆ ಕಾರಣವಾಗುತ್ತಿವೆ. ಇದರಿಂದ ತಪ್ಪಿಸಿಕೊಳ್ಳಲು ಅನೇಕರು ಆಯುರ್ವೇದ ಪದ್ಧತಿ, ಗಿಡಮೂಲಿಕೆಗಳ ಬಳಕೆ ಮತ್ತು ನೈಸರ್ಗಿಕ ಮದ್ದುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಅದರಲ್ಲಿ ಕರಿಬೇವು ಪ್ರಮುಖವಾಗಿದ್ದು, ಬೆಳಿಗ್ಗೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳು ಅಥವಾ ನೆನೆಯಿಸಿದ ನೀರನ್ನು ಸೇವಿಸುವುದು ದೇಹಕ್ಕೆ ಹಲವು ರೀತಿಯ ಲಾಭಗಳು ದೊರೆಯಲಿವೆ.
ಕರಿಬೇವು ಎಲೆಗಳನ್ನು ಇಡೀ ರಾತ್ರಿ ನೀರಿನಲ್ಲಿ ನೆನೆಸಿಟ್ಟು, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ನಿವಾರಣೆ ಆಗಲಿದ್ದು, ತೂಕ ಇಳಿಕೆಗೂ ಸಹಕಾರಿ ಆಗಲಿದೆ.
ಒಳ್ಳೆಯ ಬ್ಯಾಕ್ಟೀರಿಯಾಗಳ ಹೆಚ್ಚಳಕ್ಕೆ ಕರಿಬೇವು ಸಹಕಾರಿ
ಮುಂಜಾನೆ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳು ಅಥವಾ ಕರಿಬೇವು ನೀರನ್ನು ಸೇವಿಸುವುದು ಜೀರ್ಣಕೋಶಕ್ಕೆ ಅಪಾರ ಲಾಭ ಒದಗಿಸುತ್ತದೆ. ವಿಶೇಷವಾಗಿ ಹೊಟ್ಟೆಯಲ್ಲಿ ‘ಗುಡ್ ಬ್ಯಾಕ್ಟೀರಿಯಾ’ ಅಂದರೆ ಒಳ್ಳೆಯ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚುತ್ತದೆ. ಈ ಬ್ಯಾಕ್ಟೀರಿಯಾಗಳು ಆಹಾರವನ್ನು ಬೇಗ ಜೀರ್ಣಿಸಲು ನೆರವಾಗುವುದರಿಂದ ಅಜೀರ್ಣ, ವಾಯು, ಅನಿಲ, ಹೊಟ್ಟೆ ಭಾರವಾಗಿರುವುದು ಮೊದಲಾದ ಸಮಸ್ಯೆಗಳು ಸಹಜವಾಗಿ ಕಡಿಮೆಯಾಗುತ್ತವೆ.
ದೇಹದಿಂದ ವಿಷಾಂಶ ಹೊರಹಾಕುವ ‘ನ್ಯಾಚುರಲ್ ಡಿಟಾಕ್ಸರ್’
ಕರಿಬೇವಿನ ಎಲೆಗಳಲ್ಲಿ ಶಕ್ತಿಯುತ ಆಂಟಿ–ಆಕ್ಸಿಡೆಂಟ್ಗಳು ಮತ್ತು ಉತ್ಕರ್ಷಣ ನಿರೋಧಕಗಳು (anti-inflammatory compounds) ಸೇರಿಕೊಂಡಿವೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ, ದೇಹದಲ್ಲಿ ಜಮೆಯಾಗಿರುವ ವಿಷಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೊತೆಗೆ ಲಿವರ್ ಕಾರ್ಯಕ್ಷಮತೆಯನ್ನು ಸುಧಾರಿಸಿ ದೇಹ ಶುದ್ಧೀಕರಣ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ಖಾಲಿ ಹೊಟ್ಟೆಯ ಕರಿಬೇವು ನೀರು ಮೆಟಬಾಲಿಸಂ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಇದು ದೇಹದ ಕೊಬ್ಬು ಕರಗುವಿಕೆಯನ್ನು ಚುರುಕು ಮಾಡುತ್ತದೆ ಮತ್ತು ತೂಕ ಇಳಿಕೆಗಾಗಿ ಪ್ರಯೋಜನಕಾರಿ ಆಗಿದೆ.
ರಕ್ತವನ್ನು ಶುದ್ಧೀಕರಿಸುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ನೀರನ್ನು ಕುಡಿಯುವುದರಿಂದ ನಮ್ಮ ಇಡೀ ದೇಹಕ್ಕೆ ಅಗತ್ಯವಾಗಿ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಸಿಗಲಿದ್ದು, ಕರಿಬೇವಿನ ಸೊಪ್ಪಿನಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳ ಪ್ರಮಾಣ ಹೇರಳವಾಗಿದೆ. ಇದು ರಕ್ತವನ್ನು ಶುದ್ಧೀಕರಣ ಮಾಡಲಿದ್ದು, ಜೊತೆಗೆ ನಮ್ಮ ಲಿವರ್ ಆರೋಗ್ಯ ಕೂಡ ಮೊದಲಿಗಿಂತ ಚೆನ್ನಾಗಿರುತ್ತದೆ. ಮೆಟಬಾಲಿಸಂ ಪ್ರಕ್ರಿಯೆ ಚುರುಕಾಗಿ ನಡೆಯಲು ಇದು ಸಹಾಯಕ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ
ಕರಿಬೇವಿನ ಸೊಪ್ಪಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ನೈಸರ್ಗಿಕ ಗುಣವಿದೆ. ಇದರಲ್ಲಿರುವ ಫೈಬರ್, ಆಂಟಿ–ಆಕ್ಸಿಡೆಂಟ್ಗಳು ಹಾಗೂ ವಿಶೇಷ ಸಸ್ಯ ಸಂಯುಕ್ತಗಳು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಸಮತೋಲನದಲ್ಲಿ ಇಡಲು ಸಹಾಯ ಮಾಡುತ್ತವೆ. ಖಾಲಿ ಹೊಟ್ಟೆಗೆ ಕರಿಬೇವು ನೀರು ಅಥವಾ ಕರಿಬೇವಿನ ಎಲೆಗಳ ನಿಯಮಿತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರುಪೇರು ಆಗುವುದನ್ನು ತಡೆಯಲಿದ್ದು, ಇನ್ಸುಲಿನ್ ಸಂವೇದನೆ ಸುಧಾರಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ಬಿಪಿ ಇರುವವರಿಗೆ ಮಾತ್ರವಲ್ಲ, ಸಕ್ಕರೆ ಕಾಯಿಲೆ ಇರುವವರಿಗೆ ಕೂಡ ಕರಿಬೇವು ಅತ್ಯಂತ ಪ್ರಯೋಜನಕಾರಿ. ಇದು ರಕ್ತದ ಒತ್ತಡವನ್ನು ನಿಯಂತ್ರಿಸುವುದಲ್ಲದೆ, ಸಕ್ಕರೆ ಮಟ್ಟದ ಸ್ಥಿರತೆಯಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.

Leave a Comment