ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪೌಷ್ಟಿಕಾಂಶಯುಕ್ತ ಆಹಾರದಷ್ಟೇ ಸರಿಯಾದ ನಿದ್ರೆಯೂ ಅತ್ಯಂತ ಅಗತ್ಯವಾಗಿದೆ. ಆರೋಗ್ಯ ತಜ್ಞರ ಪ್ರಕಾರ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ 7ರಿಂದ 8 ಗಂಟೆಗಳ ನಿದ್ರೆ ಮಾಡಬೇಕು. ನಿದ್ರೆಯ ಕೊರತೆಯಿದ್ದರೆ ದೈಹಿಕ ದೌರ್ಬಲ್ಯ, ಒತ್ತಡ, ಏಕಾಗ್ರತೆಯ ಕೊರತೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ನಿದ್ರೆ ಬಹಳ ಮುಖ್ಯ.
ಇಂದಿನ ಒತ್ತಡದ ಜೀವನಶೈಲಿ, ಮಾನಸಿಕ ಕಿರಿಕಿರಿ ಮತ್ತಿತರ ಕಾರಣಗಳಿಂದ ಅನೇಕರು ರಾತ್ರಿ ಸರಿಯಾಗಿ ನಿದ್ರೆ ಮಾಡಲಾಗದೆ ಪರದಾಡುತ್ತಿದ್ದಾರೆ. ಕೆಲವರು ಕಣ್ಣು ಮುಚ್ಚಿ ಮಲಗಿದರೂ ನಿದ್ರೆ ಕಣ್ಣಿಗೆ ಹತ್ತುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ನಿಮಗೂ ರಾತ್ರಿ ನಿದ್ರೆ ಸಮಸ್ಯೆ ಕಾಡುತ್ತಿದ್ದರೆ, ಕೆಲವು ವಿಶೇಷ ಆಹಾರಗಳನ್ನು ಸೇವಿಸುವುದು ಉಪಯುಕ್ತ. ನಿದ್ರೆಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿರುವ ಈ ಆಹಾರಗಳು ಉತ್ತಮ ಹಾಗೂ ಆಳವಾದ ನಿದ್ರೆ ಪಡೆಯಲು ಸಹಾಯ ಮಾಡುತ್ತವೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಹೌದು, ರಾತ್ರಿ ಸರಿಯಾಗಿ ನಿದ್ರೆ ಬರದಿರುವುದು ಇಂದಿನ ಸಾಮಾನ್ಯ ಸಮಸ್ಯೆಯಾಗಿದ್ದು, ಇದನ್ನು ಸರಿಪಡಿಸಲು ಆಹಾರವೂ ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಪೌಷ್ಟಿಕಾಂಶಯುಕ್ತ ಆಹಾರಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿದ್ದು, ಆರೋಗ್ಯಕರ ಸಲಹೆಗಳನ್ನು ನೀವು ಪಾಲಿಸಿ.
ಬಾದಾಮಿ
ಬಾದಾಮಿ ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯಕವಾಗಿದ್ದು, ಇದರಲ್ಲಿ ಇರುವ ಮೆಲಟೋನಿನ್ ಹಾರ್ಮೋನ್ ನಿದ್ರೆಯ ಸಮಸ್ಯೆಯನ್ನು ನಿಯಂತ್ರಿಸಿ, ಆಳವಾದ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್
ನಿದ್ರೆಯನ್ನು ಉತ್ತೇಜಿಸುವ ಉತ್ತಮ ಆಹಾರಗಳಲ್ಲಿ ಡಾರ್ಕ್ ಚಾಕೊಲೇಟ್ ಕೂಡ ಒಂದು. ಇದರಲ್ಲಿ ಇರುವ ಸಿರೋಟೋನಿನ್ ಮನಸ್ಸನ್ನು ಶಾಂತಗೊಳಿಸಿ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ನಿದ್ರೆ ಬರಲು ಸಹಾಯ ಮಾಡುತ್ತದೆ.
ಕಿವಿ ಹಣ್ಣು
ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಕಿವಿ ಹಣ್ಣು ನಿದ್ರೆಯನ್ನು ಉತ್ತೇಜಿಸುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಫೋಲೇಟ್ ಜತೆಗೆ ವಿಟಮಿನ್ ಸಿ ಮತ್ತು ಇ ಇರುವುದರಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ.
ಚೆರ್ರಿ ಹಣ್ಣು
ಚೆರ್ರಿ ಹಣ್ಣಿನಲ್ಲಿ ಮೆಲಟೋನಿನ್ ಅಂಶ ಹೆಚ್ಚಾಗಿದ್ದು, ಇದು ನಿದ್ರೆಯನ್ನು ಉತ್ತೇಜಿಸುವ ಹಾರ್ಮೋನ್ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚೆರ್ರಿ ಹಣ್ಣು ಅಥವಾ ಅದರ ರಸವನ್ನು ಸೇವಿಸಿದರೆ ರಾತ್ರಿ ಉತ್ತಮ ನಿದ್ರೆ ಬರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಕುಂಬಳಕಾಯಿ ಬೀಜಗಳು
ಕುಂಬಳಕಾಯಿ ಬೀಜಗಳಲ್ಲಿ ಟ್ರಿಪ್ಟೋಫಾನ್, ಮೆಗ್ನೇಸಿಯಮ್ ಮತ್ತು ಸತುವು ಧಾರಾಳವಾಗಿದ್ದು, ಇವು ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸಿ ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.
ಬಾಳೆಹಣ್ಣು
ಮೆಗ್ನೇಸಿಯಮ್ ಮತ್ತು ಪೊಟ್ಯಾಸಿಯಮ್‌ನಿಂದ ಸಮೃದ್ಧವಾದ ಬಾಳೆಹಣ್ಣು ಸ್ನಾಯು ಎಳೆತ – ಕೀಳು ನೋವು ಇತ್ಯಾದಿ ಸಮಸ್ಯೆಗಳಿಗೆ ಕಡಿವಾಣ ಹಾಕುತ್ತದೆ. ರಾತ್ರಿ ಬಾಳೆಹಣ್ಣು ತಿನ್ನುವುದರಿಂದ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.
ಬಿಸಿ ಹಾಲು
ಹಾಲಿನಲ್ಲಿ ಟ್ರಿಪ್ಟೋಫಾನ್ ಮತ್ತು ಮೆಲಟೋನಿನ್ ಅಂಶಗಳು ಇರುವುದರಿಂದ ನಿದ್ರೆಯನ್ನು ಸುಧಾರಿಸಲು ಇದು ಸಹಕಾರಿ. ಮಲಗುವ ಮೊದಲು ಒಂದು ಲೋಟ ಬಿಸಿ ಹಾಲು ಕುಡಿಯುವ ಅಭ್ಯಾಸ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಈ ಆಹಾರಗಳನ್ನು ದಿನನಿತ್ಯ ಸೇವಿಸಿದರೆ ನಿದ್ರೆಯ ಸಮಸ್ಯೆಯನ್ನು ಹತೋಟಿಗೆ ತರುವುದರ ಜತೆಗೆ ಒಟ್ಟಾರೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.

Leave a Comment