ರಾಕಿಂಗ್ ಸ್ಟಾರ್ ಯಶ್ ಅವರು ಗುರುವಾರ(ಜ8) 40 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.ಸಂಭ್ರಮದ ವೇಳೆ ಬಹುನಿರೀಕ್ಷಿತ ಟಾಕ್ಸಿಕ್ (A Toxic Fairy Tale For Grown-Ups) ಚಿತ್ರದ ಟೇಸರ್ ಬಿಡುಗಡೆ ಮಾಡಲಾಗಿದೆ.
ಯಶ್ ಅವರು ಮತ್ತೊಮ್ಮೆ ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿಯಿಂದ ದೂರವುಳಿದಿದ್ದಾರೆ. ಟಾಕ್ಸಿಕ್ ಈಗಾಗಲೇ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ರಾಕಿಂಗ್ ಸ್ಟಾರ್ ಯಶ್ ಅವರು ಚಿತ್ರದ ಒಬ್ಬೊಬ್ಬರೆ ನಟಿಯರ ಪೋಸ್ಟರ್ ಮತ್ತು ಪಾತ್ರದ ಹೆಸರು ಬಹಿರಂಗ ಪಡಿಸುತ್ತಾ ಕುತೂಹಲ ಕೆರಳಿಸುತ್ತಲೇ ಇದ್ದರು. ಹಾಲಿವುಡ್ ಮಾದರಿಯ ಚಿತ್ರದಲ್ಲಿ ‘ರಾಯ್’ ಆಗಿ ಹಿಂದೆಂದೂ ಕಾಣದ ಅದ್ದೂರಿ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್ ಅದ್ದೂರಿಯಾಗಿದ್ದು ಭಾರೀ ಕುತೂಹಲ ಮೂಡಿಸಿದೆ.
ಕಿಯಾರಾ ಅಡ್ವಾಣಿ ನಾಡಿಯಾ ಆಗಿ, ಹುಮಾ ಖುರೇಷಿ ಎಲಿಜಬೆತ್ ಆಗಿ, ನಯನತಾರಾ ಗಂಗಾ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಹಿರಂಗ ಪಡಿಸಿದ್ದರು. ತಾರಾ ಸುತಾರಿಯ ಬಿಗ್ ಬಜೆಟ್ ಚಿತ್ರದಲ್ಲಿ ರೆಬೆಕಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ‘ಕಾಂತಾರ- ಅಧ್ಯಾಯ 1’ ಖ್ಯಾತಿಯ ರುಕ್ಷ್ಮಿಣಿ ವಸಂತ್ ಅವರು ಮೆಲಿಸಾ ಆಗಿ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.
ನಟಿ ಗೀತು ಮೋಹನ್ ದಾಸ್ ನಿರ್ದೇಶನದ ಗತಕಾಲದ ಗ್ಯಾಂಗ್‌ಸ್ಟರ್ ಸಿನಿಮಾವನ್ನು ವೆಂಕಟ್ ಕೆ. ನಾರಾಯಣ ಮತ್ತು ಯಶ್ ಅವರು ತಮ್ಮ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ಟೊವಿನೋ ಥಾಮಸ್, ಅಕ್ಷಯ್ ಒಬೆರಾಯ್, ಸುದೇವ್ ನಾಯರ್, ಅಮಿತ್ ತಿವಾರಿ, ಡೇರೆಲ್ ಡಿಸಿಲ್ವಾ, ನತಾಲಿಯಾ ಬರ್ನ್, ಕೈಲ್ ಪಾಲ್ ಇನ್ನೂ ಕೆಲ ನಟರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ಚ್ 19 ರಂದು ಚಿತ್ರ ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದಲ್ಲಿ ಬ್ಯುಸಿ ಆದ ಯಶ್
ಯಶ್ ಅವರು ನಿನ್ನೆಯೇ ಫ್ಯಾನ್ಸ್‌ಗೆ ಪತ್ರ ಬರೆದು ಈ ಬಾರಿಯೂ ಭೇಟಿ ಅಸಾಧ್ಯ ಎಂದು ಹೇಳಿದ್ದರು. ನನ್ನ ಪ್ರೀತಿಯ ಅಭಿಮಾನಿಗಳಿಗೆ, ಕಳೆದ ಕೆಲವು ವರ್ಷಗಳಿಂದ ನೀವು ನನ್ನನ್ನು ಭೇಟಿಯಾಗಲು ಹೇಗೆ ಕಾಯುತ್ತಿದ್ದೀರಿ ಎಂದು ನನಗೆ ಪ್ರಾಮಾಣಿಕವಾಗಿ ತಿಳಿದಿದೆ. ನನ್ನನ್ನು ನಂಬಿರಿ, ನಿಮ್ಮೆಲ್ಲರನ್ನೂ ನೋಡಲು ನಾನು ಅಷ್ಟೇ ಹಾತೊರೆಯುತ್ತಿದ್ದೆನೆ.
ಈ ವರ್ಷ ನನ್ನ ಹುಟ್ಟುಹಬ್ಬದಂದು ನಿಮ್ಮನ್ನು ಭೇಟಿ ಆಗಬೇಕು ಎಂದು ಬಯಸಿದ್ದೆ, ಆದರೆ ಮಾರ್ಚ್ 19, 2026 ರಂದು ಚಿತ್ರಮಂದಿರಗಳಲ್ಲಿ ನಿಮಗಾಗಿ ಸಿದ್ಧವಾಗುವ ಚಿತ್ರವನ್ನು ಪೂರ್ಣಗೊಳಿಸುವಲ್ಲಿ ನಾನು ಸಂಪೂರ್ಣವಾಗಿ ಮಗ್ನನಾಗಿದ್ದೇನೆ.
ಈ ಕಾರಣದಿಂದಾಗಿ, ನಾನು ಇನ್ನೂ ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ.ಶೀಘ್ರದಲ್ಲೇ ಇನ್ನೂ ದೊಡ್ಡ ಮಟ್ಟದಲ್ಲು ನಿಮ್ಮನ್ನು ಭೇಟಿಯಾಗುತ್ತೇನೆ. ಈ ಮಧ್ಯೆ, ನಾನು ನಿಮ್ಮೆಲ್ಲರ ಶುಭಾಶಯಗಳನ್ನು ವೈಯಕ್ತಿಕವಾಗಿ ಕೇಳಿಕೊಳ್ಳುತ್ತೇನೆ ಮತ್ತು ನೀವು ಕಳುಹಿಸುವ ಪ್ರತಿಯೊಂದು ಪ್ರೀತಿಯನ್ನು ಪಾಲಿಸುತ್ತೇನೆ. ನಿಮ್ಮ, ಯಶ್ ಎಂದು ಬರೆದುಕೊಂಡಿದ್ದರು.

Leave a Comment