ಮಿಲನಾ ಪ್ರಕಾಶ್ ನಿರ್ಮಿಸಿ ನಿರ್ದೇಶನ ಮಾಡಿರುವ ‘ಡೆವಿಲ್’ ಸಿನಿಮಾ ಬಿಡುಗಡೆಗೆ 20 ದಿನಗಳು ಮಾತ್ರ ಬಾಕಿಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರೂ ಅದ್ಧೂರಿಯಾಗಿ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಪ್ರಚಾರ ಜೋರಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅವರ ದಿ ಡೆವಿಲ್ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಅಪಾರವಾದ ನಿರೀಕ್ಷೆ ಇದೆ. ಡಿಸೆಂಬರ್ 12ರಂದು ಈ ಸಿನಿಮಾ ತೆರೆಗೆ ಬರಲಿದೆ ಎಂದು ಫ್ಯಾನ್ಸ್ ಭಾರಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಡೆವಿಲ್ ಫೀವರ್ ಎಲ್ಲ ಕಡೆ ಶುರುವಾಗಿದೆ. ಈ ನಡುವೆ ದಿ ಡೆವಿಲ್ ಸಿನಿಮಾ ಟೀಮ್ ಕಡೆಯಿಂದ ಒಂದು ಗುಡ್ ನ್ಯೂಸ್ ಹೊರಬಿದ್ದಿದೆ. ಸಿನಿಮಾ ತೆರೆಗೆ ಬರಲು 20 ದಿನಗಳಷ್ಟೇ ಬಾಕಿ ಇರುವಾಗ ಒಂದು ಬಿಗ್ ಅಪ್ಡೇಟ್ ಅನ್ನು ಚಿತ್ರತಂಡ ಹಂಚಿಕೊಂಡಿದೆ. ಡಿಸೆಂಬರ್ 12ಕ್ಕೆ ‘ಡೆವಿಲ್’ ಸಿನಿಮಾ ಬಿಡುಗಡೆ ಎಂದು 3 ತಿಂಗಳ ಹಿಂದೆಯೇ ಘೋಷಿಸಿದ್ದರು. ಅಂದಿನಿಂದಲೂ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಚಿತ್ರದ 3 ಹಾಡುಗಳು ಬಂದು ಸದ್ದು ಮಾಡ್ತಿದೆ. ಡಿಸೆಂಬರ್ 1 ರಂದು ಟ್ರೈಲರ್ ರಿಲೀಸ್ ಮಾಡಿ ಪ್ರಮೋಷನ್ ಕಾವು ಹೆಚ್ಚಿಸುವ ಪ್ರಯತ್ನ ನಡೀತಿದೆ. ದರ್ಶನ್ ಅನುಪಸ್ಥಿತಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ಹಾಗೂ ದಿನಕರ್ ‘ಡೆವಿಲ್’ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.
ರಿಲೀಸ್ ಡೇಟ್ನಲ್ಲಿ ಬದಲಾವಣೆ
ಹೌದು, ಬಿಡುಗಡೆಗೆ ಇನ್ನೇನು 20 ದಿನಗಳು ಇರುವಾಗ ರಿಲೀಸ್ ಡೇಟ್ ಅನ್ನು ಚಿತ್ರತಂಡ ಬದಲಾಯಿಸಿದೆ. ಹಾಗಂತ, ದಿ ಡೆವಿಲ್ ಸಿನಿಮಾ ಪೋಸ್ಟ್ ಪೋನ್ ಆಯ್ತು ಎಂದುಕೊಳ್ಳಬೇಡಿ. ಅಸಲಿಗೆ ಇದು ಅಭಿಮಾನಿಗಳಿಗೆ ಖುಷಿಯ ವಿಚಾರವೇ ಸರಿ. ಯಾಕೆಂದರೆ, ಡಿಸೆಂಬರ್ 12ರಂದು ತೆರೆಗೆ ಬರಬೇಕಿದ್ದ ದಿ ಡೆವಿಲ್ ಸಿನಿಮಾವನ್ನು ಡಿಸೆಂಬರ್ 11ರಂದೇ ರಿಲೀಸ್ ಮಾಡುವುದಕ್ಕೆ ಚಿತ್ರದ ನಿರ್ಮಾಪಕರು ಮುಂದಾಗಿದ್ದಾರೆ.
ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ರಚನಾ ರೈ ನಟಿಸಿದ್ದಾರೆ. ಇನ್ನುಳಿದಂತೆ ಗಿಲ್ಲಿ ನಟ, ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್, ಅವಿನಾಶ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬೆಂಗಳೂರು, ಮೈಸೂರು, ಉದಯ್ಪುರ್ ಹಾಗೂ ಬ್ಯಾಂಕಾಕ್ನಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.
ಅಜನೀಶ್ ಲೋಕನಾಥ್ ಸಂಗೀತ, ಸುಧಾಕರ್ ರಾಜ್ ಛಾಯಾಗ್ರಹಣ ಹಾಗೂ ಕಾಂತರಾಜ್ ಸಂಭಾಷಣೆ ಚಿತ್ರಕ್ಕಿದೆ. ಚಿತ್ರದ ಪೋಸ್ಟರ್, ಟೀಸರ್, ಸಾಂಗ್ಸ್ ಹಿಟ್ ಆಗಿ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. 14 ವರ್ಷಗಳ ಹಿಂದೆ ‘ಸಾರಥಿ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಕೂಡ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಬಳಿಕ ಜೈಲಿನಿಂದ ಹೊರಬಂದ ದರ್ಶನ್ ರಾಜ್ಯಾದ್ಯಂತ ವಿಜಯಯಾತ್ರೆ ಮಾಡಿ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದರು.
‘ಸಾರಥಿ’ ಮ್ಯಾಜಿಕ್ ‘ಡೆವಿಲ್’ ಸಿನಿಮಾ ರಿಪೀಟ್ ಮಾಡುತ್ತದೆ ಎನ್ನುವ ಲೆಕ್ಕಾಚಾರ ಕೆಲವರದ್ದು. ಇನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಸಿನಿಮಾ ಬಿಡುಗಡೆಗೆ ಬೆಂಬಲವಾಗಿ ನಿಂತಿದೆ. ದೊಡ್ಡಮಟ್ಟದಲ್ಲಿ ರಾಜ್ಯಾದ್ಯಂತ ಸಿನಿಮಾ ತೆರೆಗಪ್ಪಳಿಸಲಿದೆ. ಅಭಿಮಾನಿಗಳು ದೊಡ್ಡಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಲು ಕಾಯುತ್ತಿದ್ದಾರೆ. ಅದಕ್ಕಾಗಿ ಈಗಾಗಲೇ ತಯಾರಿ ಆರಂಭಿಸಿದ್ದಾರೆ.
ಈ ಹಿಂದೆ ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ನಲ್ಲಿ ‘ತಾರಕ್’ ಸಿನಿಮಾ ಬಂದು ಗೆದ್ದಿತ್ತು. ‘ಮಿಲನಾ’, ‘ತಾರಕ್’ ರೀತಿಯ ಹಿಟ್ ಸಿನಿಮಾಗಳನ್ನು ಪ್ರಕಾಶ್ ಕೊಟ್ಟಿದ್ದಾರೆ. ಹಾಗಾಗಿ ‘ಡೆವಿಲ್’ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ದರ್ಶನ್ ಸಿನಿಮಾಗಳು ಕರ್ನಾಟಕದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತವೆ ಅದರಲ್ಲಿ ಎರಡು ಮಾತಿಲ್ಲ. ಸದ್ಯ ಸಂಕಷ್ಟಕ್ಕೆ ಸಿಲುಕಿರುವ ದರ್ಶನ್ಗೆ ‘ಡೆವಿಲ್’ ಗೆಲುವು ಅನಿವಾರ್ಯ ಎನ್ನುವಂತಾಗಿದೆ. ಹಾಗಾಗಿ ಸಿನಿರಸಿಕರ ದೃಷ್ಟಿ ಡಿಸೆಂಬರ್ 11ರತ್ತ ನೆಟ್ಟಿದೆ.

Leave a Comment