ವಯಸ್ಸು ಆದ್ದಂತೆ ಕೂದಲು ಬಿಳಿ ಬಣ್ಣಕ್ಕೆ ಬರೋದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ 20 ಮತ್ತು 30ರ ಹರೆಯದವರಲ್ಲಿಯೇ ಕೂದಲು ಬೆಳ್ಳಗಾಗುವುದು ಬಹುದೊಡ್ಡ ಸಮಸ್ಯೆ ಎನಿಸಿಕೊಂಡಿದೆ. ಇದರಿಂದಾಗಿ ಹೆಚ್ಚಿನವರು ಮುಜುಗರಕ್ಕೊಳಗಾಗುತ್ತಾರೆ. ಇದನ್ನಂತು ಮರೆಮಾಚಲು ನಾನಾ ರೀತಿಯ ಸರ್ಕಸ್ ಮಾಡಿದರೂ ಪರಿಹಾರ ಸಿಗುವುದಿಲ್ಲ. ಆನುವಂಶಿಕತೆ ಜತೆ ನಾವು ಸೇವಿಸುವ ಆಹಾರ ಕೂಡ ಕೆಲವೊಮ್ಮೆ ಬಿಳಿ ಕೂದಲಿಗೆ ಕಾರಣವಾಗಬಹುದು. ಹಾಗಾಗಿ ಸರಿಯಾದ ಆಹಾರ ಕ್ರಮದ ಮೂಲಕ ಮೆಲನಿನ್ ಉತ್ಪಾದನೆಯನ್ನು ಹೆಚ್ಚಿಸಿ, ಈ ಸಮಸ್ಯೆಯನ್ನು ತಡೆಗಟ್ಟಬಹುದು.
ಕೂದಲು ಕಪ್ಪಾಗಿರಲು ಸಹಾಯ ಮಾಡುವ ಆಹಾರಗಳು
ಮೊಟ್ಟೆ: ಮೊಟ್ಟೆಯಲ್ಲಿ ವಿಟಮಿನ್ ಬಿ 12, ಬಯೋಟಿನ್ ಮತ್ತು ಉತ್ತಮ ಗುಣಮಟ್ಟದ ಪ್ರೋಟೀನ್ ಇದೆ. ಬಿ 12 ಹಾಗೂ ಪೌಷ್ಟಿಕಾಂಶ ಕೊರತೆಯಿಂದ ಕೂದಲು ಬಿಳಿಯಾಗುತ್ತದೆ. ಹಾಗಾಗಿ ಬೇಯಿಸಿದ ಮೊಟ್ಟೆಯನ್ನು ತಿನ್ನುವುದು ಹೆಚ್ಚು ಪ್ರಯೋಜನಕಾರಿ.
ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದ್ದು, ಕೂದಲಿನ ವರ್ಣದ್ರವ್ಯ ಕೋಶಗಳನ್ನು ರಕ್ಷಿಸುತ್ತದೆ. ಮೆಲನಿನ್ ಉತ್ಪಾದನೆಗೂ ನೆಲ್ಲಿಕಾಯಿ ಸೇವನೆ ಅಗತ್ಯವಾಗಿದ್ದು ವಾರಕ್ಕೆ ಒಮ್ಮೆಯಾದರೂ ಇದನ್ನು ಸೇವಿಸಿ.
ದಾಳಿಂಬೆ: ಇದರಲ್ಲಿ ವಿಟಮಿನ್ ಬಿ6 ಮತ್ತು ಫೋಲೇಟ್ ಇದ್ದು ದೇಹದ ಒತ್ತಡವನ್ನು ಕಡಿಮೆ ಮಾಡುತ್ತದೆ. ಕೂದಲಿನ ಆರೋಗ್ಯಕ್ಕೂ ಇದರ ಸೇವನೆ ಉತ್ತಮವಾಗಿದ್ದು, ಕೂದಲು ಬೆಳ್ಳಗಾಗುವುದನ್ನು ನಿಧಾನಗೊಳಿಸುತ್ತದೆ.
ಬೀಜಗಳು: ಕಪ್ಪು ಎಳ್ಳು ಕೂದಲಿನ ಆರೋಗ್ಯಕ್ಕೆ ಉತ್ತಮವಾಗಿದ್ದು ವೈಜ್ಞಾನಿಕವಾಗಿ ತಾಮ್ರ ಮತ್ತು ಕಬ್ಬಿಣದ ಮೂಲವೆಂದು ಗುರುತಿಸಲ್ಪಟ್ಟಿದೆ. ಅದೇ ರೀತಿ ಮೆಲನಿನ್ ಉತ್ಪಾದನೆಗೆ ಅವಶ್ಯಕವಾಗಿದೆ. ಕುಂಬಳ ಕಾಯಿ ಬೀಜ ಮತ್ತು ಸೂರ್ಯಕಾಂತಿ ಬೀಜಗಳ ಸೇವನೆ ಕೂಡ ಕೂದಲಿಗೆ ನೈಸರ್ಗಿಕ ಬಣ್ಣ ನೀಡಲು ಅತ್ಯಗತ್ಯ.
ಪಾಲಕ್ ಸೊಪ್ಪು: ಇದರಲ್ಲಿ ಕಬ್ಬಿಣದ ಅಂಶವು ಹೇರಳವಾಗಿದ್ದು ಕೂದಲಿನ ಬುಡಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಕಬ್ಬಿಣದ ಕೊರತೆ ಇರುವವರಲ್ಲಿ ಕೂದಲು ಬೇಗನೆ ಬೆಳೆಯಲು ಇದು ಸಹಾಯ ಮಾಡುತ್ತದೆ.
ಆಕ್ರೋಟ್: ಇದರಲ್ಲಿ ಒಮೆಗಾ-3 ಫ್ಯಾಟಿ ಆ್ಯಸಿಡ್ಗಳು ಮತ್ತು ಆ್ಯಂಟಿ-ಆಕ್ಸಿಡೆಂಟ್ಗಳಿದ್ದು, ಕೂದಲಿನ ಕೋಶಗಳು ಹಾನಿಯಾಗದಂತೆ ರಕ್ಷಿಸುತ್ತವೆ.
ಹಾಲು ಮತ್ತು ಮೊಸರು: ಹಾಲು ಮತ್ತು ಮೊಸರು ಇವು ಬಿ12 ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲಗಳು. ಕೂದಲಿನ ಆರೋಗ್ಯಕ್ಕೆ ಇವು ಉತ್ತಮ. ಸಂಸ್ಕರಿಸಿದ ಡೈರಿ ಉತ್ಪನ್ನಗಳಿಗಿಂತ ತಾಜಾ ಹಾಲು ಮತ್ತು ಮನೆಯಲ್ಲಿ ಮಾಡಿದ ಮೊಸರು ಸೇವನೆ ಮಾಡುವುದು ಉತ್ತಮ. ಕೇವಲ ಆಹಾರವಷ್ಟೇ ಅಲ್ಲದೆ, ಧೂಮಪಾನ ತ್ಯಜಿಸುವುದು, ಸರಿಯಾದ ಸಮಯಕ್ಕೆ ಊಟ ಮಾಡುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು ಕೂಡ ಮುಖ್ಯವಾಗುತ್ತದೆ.

Leave a Comment