ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯ ದೇವರನ್ನು ಗ್ರಹಗಳ ರಾಜನಾಗಿ ಪರಿಗಣಿಸಲಾಗುತ್ತದೆ. ಸೂರ್ಯನು ಶಕ್ತಿ, ಆತ್ಮವಿಶ್ವಾಸ, ಗೌರವ ಮತ್ತು ನಾಯಕತ್ವದ ಪ್ರತೀಕವಾಗಿದ್ದಾನೆ. ಜಾತಕದಲ್ಲಿ ಸೂರ್ಯನು ಬಲವಾದ ಸ್ಥಾನದಲ್ಲಿದ್ದ ವ್ಯಕ್ತಿಗಳು ತಮ್ಮ ಜೀವನದಲ್ಲಿ ನಿರಂತರ ಪ್ರಗತಿ, ಮಾನಸಿಕ ದೃಢತೆ ಹಾಗೂ ಸಾಮಾಜಿಕ ಗೌರವವನ್ನು ಪಡೆಯುತ್ತಾರೆ ಎಂಬ ನಂಬಿಕೆ ಇದೆ. ವಿಶೇಷವಾಗಿ ವೃತ್ತಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಸಾಧಿಸಲು ಸೂರ್ಯನ ಅನುಗ್ರಹ ಅತ್ಯಂತ ಅಗತ್ಯವೆಂದು ಜ್ಯೋತಿಷ್ಯರು ಹೇಳುತ್ತಾರೆ.
ಮನೆಯ ಏಳಿಗೆ, ವೃತ್ತಿ ಜೀವನದಲ್ಲಿ ಯಶಸ್ಸು ತಂದು ಕೊಡುವ ಈ ಆದಿತ್ಯ ದೇವನ ಕೃಪೆಗೆ ನೀವು ಪಾತ್ರರಾಗಬೇಕು ಎಂತಾದರೆ ಸೂರ್ಯ ದೇವನ ಪ್ರಿಯವಾಗಿರುವ ಭಾನುವಾರ ದಿನದಂದು ತಪ್ಪದೇ ಈ ಕ್ರಮಗಳನ್ನು ಅನುಸರಿಸಿಬೇಕು.
ಸೂರ್ಯನನ್ನು ಮೆಚ್ಚಿಸುವ ಮೊದಲ ಮತ್ತು ಸರಳ ಮಾರ್ಗವೆಂದರೆ ಪ್ರಾತಃಕಾಲ ಬೇಗನೆ ಎದ್ದು ದಿನಚರಿಯನ್ನು ಪ್ರಾರಂಭಿಸುವುದು. ಸೂರ್ಯೋದಯಕ್ಕೂ ಮುನ್ನ ಎದ್ದೇಳುವುದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿದ್ದು, ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಭಾನುವಾರವನ್ನು ಸೂರ್ಯ ದೇವರಿಗೆ ಸಮರ್ಪಿತ ದಿನವೆಂದು ಪರಿಗಣಿಸುವುದರಿಂದ, ಈ ದಿನದಂದು ಮಾಡುವ ಕೆಲವು ವಿಶೇಷ ಪರಿಹಾರಗಳು ಸೂರ್ಯನ ಕೃಪೆಯನ್ನು ಪಡೆಯಲು ಸಹಾಯಕವಾಗುತ್ತವೆ.
ಜಲ ಅರ್ಘ್ಯ ಅರ್ಪಿಸಿ
ಭಾನುವಾರದಂದು ಸೂರ್ಯ ದೇವರಿಗೆ ಅರ್ಘ್ಯ ಅರ್ಪಿಸುವುದು ಅತ್ಯಂತ ಮಂಗಳಕರವೆಂದು ನಂಬಲಾಗಿದೆ. ಪ್ರತಿ ದಿನ ಸಾಧ್ಯವಾಗದಿದ್ದರೂ ಕನಿಷ್ಠ ಭಾನುವಾರದಂದು ಬೆಳಿಗ್ಗೆ ಸೂರ್ಯನಿಗೆ ಜಲ ಅರ್ಘ್ಯ ಅರ್ಪಿಸುವುದರಿಂದ ಕೆಲಸದಲ್ಲಿ ಉಂಟಾಗುವ ಅಡೆತಡೆಗಳು ದೂರವಾಗುತ್ತವೆ. ಸ್ಥಗಿತಗೊಂಡಿರುವ ಕಾರ್ಯಗಳು ಪುನಃ ಚಲನೆ ಪಡೆಯುತ್ತವೆ ಹಾಗೂ ಜೀವನದಲ್ಲಿ ಶುಭದ ಆರಂಭವಾಗುತ್ತದೆ ಎಂಬ ನಂಬಿಕೆ ಇದೆ.
ದಾನ ಮಾಡುವುದು
ಇದೇ ರೀತಿ, ಭಾನುವಾರದಂದು ಮಾಡುವ ದಾನಕ್ಕೂ ವಿಶೇಷ ಮಹತ್ವವಿದೆ.
ಅಗತ್ಯವಿರುವವರಿಗೆ ಧಾನ್ಯ, ಬಟ್ಟೆ, ಹಣ್ಣುಗಳು ಅಥವಾ ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಸೂರ್ಯ ದೇವರ ಆಶೀರ್ವಾದ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ದಾನದಿಂದ ಮನಸ್ಸಿಗೂ ಶಾಂತಿ ಸಿಗುತ್ತದೆ.
ಒಳಿತು ಮಾಡುವ ಕೆಂಪು ಶ್ರೀಗಂಧದ ತಿಲಕ
ಆತ್ಮವಿಶ್ವಾಸದ ಕೊರತೆ ಅಥವಾ ಅಂಜಿಕೆ ಇದ್ದವರು ಭಾನುವಾರದಂದು ಕೆಂಪು ಶ್ರೀಗಂಧದ ತಿಲಕವನ್ನು ಧರಿಸಿ ಹೊರಡುವುದು ಉತ್ತಮ. ಇದರಿಂದ ಧೈರ್ಯ, ಶೌರ್ಯ ಮತ್ತು ಆತ್ಮಬಲ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಈ ವಿಷಯ ಗಮನದಲ್ಲಿಟ್ಟುಕೊಳ್ಳಿ
ಅಷ್ಟೇ ಅಲ್ಲ, ಸೂರ್ಯನಿಗೆ ಅರ್ಘ್ಯ ಅರ್ಪಿಸುವಾಗ ತಾಮ್ರದ ಪಾತ್ರೆಯನ್ನು ಬಳಸುವುದು ವಿಶೇಷವಾಗಿ ಶುಭಕರ. ತಾಮ್ರವು ಸೂರ್ಯನೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ನಂಬಲಾಗಿದ್ದು, ಇದರಿಂದ ಜೀವನದ ಅಡೆತಡೆಗಳು ಕಡಿಮೆಯಾಗುತ್ತವೆ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜೊತೆಗೆ ಸೂರ್ಯನ ಕೃಪೆಯಿಂದ ಆರೋಗ್ಯ, ಶಕ್ತಿ ಮತ್ತು ಜ್ಞಾನ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.
ಒಟ್ಟಾರೆ, ಭಾನುವಾರದಂದು ಸೂರ್ಯ ದೇವರನ್ನು ಭಕ್ತಿಯಿಂದ ಆರಾಧಿಸಿ ಈ ಪರಿಹಾರಗಳನ್ನು ಅನುಸರಿಸುವುದರಿಂದ ಜೀವನದಲ್ಲಿ ಧನಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

Leave a Comment