ಕಾಲ್ಗೆಜ್ಜೆ. ಕಾಲಿನ ಅಂದ ಹೆಚ್ಚಿಸುವ ಕಾಲ್ಗೆಜ್ಜೆಯನ್ನು ಇಷ್ಟಪಡದವರೇ ಇಲ್ಲ. ಮನಕ್ಕೊಪ್ಪುವ ಅಂದವಾದ ಡಿಸೈನ್ ಗಳುಳ್ಳ ಕಾಲು ಗೆಜ್ಜೆ ಧರಿಸಿ ಮನೆ ತುಂಬಾ ಝಲ್ ಝಲ್ ಎಂದು ಸದ್ದು ಮಾಡುತ್ತಾ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿದ್ದರೆ ಮನೆಗೆ ಒಂದು ರೀತಿಯ ಶೋಭೆ!
ಇತ್ತೀಚಿನ ದಿನಗಳಲ್ಲಿ ನಾನಾ ನಮೂನೆಯ ವಿನ್ಯಾಸದ ಕಾಲು ಗೆಜ್ಜೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಬೆಳ್ಳಿ ಕಾಲು ಗೆಜ್ಜೆಯ ಜೊತೆಗೆ ಪ್ಯಾನ್ಸಿ ಗೆಜ್ಜೆಗಳು ಕೂಡಾ ದೊರೆಯುತ್ತದೆ. ಆದರೂ ಹೆಣ್ಣು ಮಗಳ ಮೊದಲ ಪ್ರಾಶಸ್ತ್ಯ ಏನಿದ್ದರೂ ಬೆಳ್ಳಿ ಗೆಜ್ಜೆಗೆ.
ಕಾಲುಗಳ ಸೌಂದರ್ಯವನ್ನು ಇಮ್ಮಡಿಗೊಳಿಸುವ ಗೆಜ್ಜೆಯನ್ನು ಧರಿಸುವುದರ ಹಿಂದೆ ಮಹತ್ತರವಾದ ಉದ್ದೇಶವಿದೆ. ಕಾಲು ಗೆಜ್ಜೆ ಧರಿಸುವುದು ಕೇವಲ ಕಾಲಿನ ಶೃಂಗಾರಕ್ಕೆ ಮಾತ್ರವಲ್ಲ. ಮನೆಯ ಏಳ್ಗೆ ಹಾಗೂ ಸಂತೋಷವೂ ಇದರಲ್ಲಿ ಅಡಗಿದೆ.
ಕರಿಮಣಿ, ಕಾಲುಂಗುರದಂತೆ ಕಾಲ್ಗೆಜ್ಜೆಗೂ ಕೂಡಾ ಭಾರತೀಯ ಶಾಸ್ತ್ರದಲ್ಲಿ ಮಹತ್ವವಿದೆ. ದೈವಿಕ ಶಕ್ತಿಯನ್ನು ಆಕರ್ಷಿಸುವ ಕಾಲು ಗೆಜ್ಜೆಯನ್ನು ಧರಿಸುವುದರಿಂದ ಮನೆಯಲ್ಲಿ ಸದಾ ಸಂತೋಷ, ಶಾಂತಿ ನೆಲೆಸಿರುತ್ತದೆ.
ಮುಖ್ಯವಾಗಿ ಕಾಲಿನ ಬಲವನ್ನು ಹೆಚ್ಚಿಸುವ ಕಾಲ್ಗೆಜ್ಜೆ ಶಬ್ದ ಮನೆಯನ್ನು ಪ್ರವೇಶಿಸುವ ನಕಾರಾತ್ಮಕ ಶಕ್ತಿಯನ್ನು ತಡೆಯುತ್ತದೆ. ಇದೀಗ ನಾನಾ ನಮೂನೆಯ ಫ್ಯಾನ್ಸಿ ಗೆಜ್ಜೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ ನಿಜ. ಆದರೆ ಬೆಳ್ಳಿ ಲೋಹ ಶರೀರಕ್ಕೆ ಒಳ್ಳೆಯದು. ಬೆಳ್ಳಿಯ ಕಾಲುಗೆಜ್ಜೆಗೆ ಅನೇಕ ಖಾಯಿಲೆಗಳನ್ನು ತಡೆಯುವ ಶಕ್ತಿಯಿದೆ.

Leave a Comment