Kalasaipalya Re Release: ಕನ್ನಡ ಚಿತ್ರರಂಗದಲ್ಲಿ ಸದ್ಯಕ್ಕೆ ದೊಡ್ಡ ಸಿನಿಮಾಗಳ ಕೊರತೆ ಎದ್ದುಕಾಣುತ್ತಿದೆ. ಹೊಸ ಸಿನಿಮಾಗಳಿಲ್ಲದೆ ಚಿತ್ರಮಂದಿರಗಳನ್ನು ಮುಚ್ಚುವ ಪರಿಸ್ಥಿತಿ ಬಂದಾಗ, ಚಿತ್ರಮಂದಿರಗಳ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ ಆಸರೆಯಾಗುತ್ತಿರುವುದು ಹಳೇ ಸೂಪರ್ ಹಿಟ್ ಸಿನಿಮಾಗಳ ಮರು-ಬಿಡುಗಡೆ (Re-release) ಟ್ರೆಂಡ್. ಇತ್ತೀಚೆಗೆ ನಟ ದರ್ಶನ್ ಜೈಲು ಸೇರಿದ ಬಳಿಕ ಅವರ ಹಳೆಯ ಹಿಟ್ ಚಿತ್ರಗಳಾದ ‘ಶಾಸ್ತ್ರಿ’, ‘ನಮ್ಮ ಪ್ರೀತಿಯ ರಾಮು’ ಮತ್ತು ‘ನವಗ್ರಹ’ ಸಿನಿಮಾಗಳು ಮತ್ತೆ ತೆರೆಗೆ ಬಂದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಅಭಿಮಾನಿಗಳು ಹಬ್ಬದಂತೆ ಇದನ್ನು ಆಚರಿಸಿದ್ದರು. ಇದೀಗ ಅದೇ ಸಾಲಿಗೆ ದರ್ಶನ್ ವೃತ್ತಿಬದುಕಿನ ದಿಕ್ಕನ್ನೇ ಬದಲಿಸಿದ ಮತ್ತೊಂದು ಬ್ಲಾಕ್‌ಬಸ್ಟರ್ ಸಿನಿಮಾ ಸೇರ್ಪಡೆಯಾಗುತ್ತಿದೆ.
ಅದುವೇ ದರ್ಶನ್ ಮತ್ತು ರಕ್ಷಿತಾ ಕಾಂಬಿನೇಷನ್‌ನ ಸೂಪರ್ ಹಿಟ್ ಸಿನಿಮಾ ‘ಕಲಾಸಿಪಾಳ್ಯ’.
ನಿರ್ದೇಶಕ ಓಂ ಪ್ರಕಾಶ್ ರಾವ್ ಅವರೇ ಒಪ್ಪಿಕೊಂಡಂತೆ, ಬೇರೆ ಭಾಷೆಯ ಸುಮಾರು 7 ಸಿನಿಮಾಗಳ ಅತ್ಯುತ್ತಮ ದೃಶ್ಯಗಳನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ಸಿದ್ಧಪಡಿಸಿದ ‘ರೀ-ಮಿಕ್ಸ್’ ಆಕ್ಷನ್ ಪ್ಯಾಕೇಜ್ ಇದಾಗಿತ್ತು. ನಿರ್ಮಾಪಕ ರಾಮು ಬಂಡವಾಳ ಹೂಡಿದ್ದ ಈ ಸಿನಿಮಾ ಇದೀಗ ಜೂನ್ 19ರ ಶುಕ್ರವಾರದಂದು ರಾಜ್ಯಾದ್ಯಂತ ಆಯ್ದ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗುತ್ತಿದೆ. ಈಗಾಗಲೇ ಬುಕ್‌ಮೈಶೋನಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಭರದಿಂದ ಸಾಗಿದೆ.
Kalasaipalya Re Release: ಮುಂಜಾನೆಯೇ ಫ್ಯಾನ್ಸ್ ಶೋ ಹವಾ!
ಸಾಮಾನ್ಯವಾಗಿ ಹೊಸ ಸ್ಟಾರ್ ಸಿನಿಮಾಗಳಿಗೆ ಮಾತ್ರ ಮುಂಜಾನೆ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಆದರೆ, 22 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ಚಿತ್ರಕ್ಕೆ ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆಯೋಜಿಸಲಾಗಿದೆ.
• ಮಾಗಡಿ ರಸ್ತೆಯ ಪ್ರಸನ್ನ, ಜೆಪಿ ನಗರದ ಸಿದ್ದೇಶ್ವರ ಮತ್ತು ಕೆಜಿ ರಸ್ತೆಯ ನರ್ತಕಿ ಚಿತ್ರಮಂದಿರಗಳಲ್ಲಿ ಪ್ರದರ್ಶನಗಳು ಕನ್ಫರ್ಮ್ ಆಗಿವೆ.
•ವಿಶೇಷವೆಂದರೆ, ಪ್ರಸನ್ನ ಚಿತ್ರಮಂದಿರದಲ್ಲಿ ಜೂನ್ 19ರಂದು ಒಟ್ಟು 6 ಶೋಗಳನ್ನು ಇಡಲಾಗಿದ್ದು, ಮೊದಲ ಶೋನ ಟಿಕೆಟ್‌ಗಳು 4 ದಿನ ಮುಂಚಿತವಾಗಿಯೇ ಸಂಪೂರ್ಣ ಸೋಲ್ಡ್ ಔಟ್ ಆಗಿವೆ.
Kalasaipalya Re Release: ದರ್ಶನ್ ಕೆರಿಯರ್ ಬದಲಿಸಿದ ‘ಕೆಂಚ’
‘ಕಲಾಸಿಪಾಳ್ಯ’ ಬಿಡುಗಡೆಯಾಗುವ ಮುನ್ನ ದರ್ಶನ್ ಅವರ ವೃತ್ತಿಜೀವನ ಏರಿಳಿತಗಳಿಂದ ಕೂಡಿತ್ತು. ಆದರೆ, ಈ ಚಿತ್ರದಲ್ಲಿ ಲೋಕಲ್ ಹುಡುಗ ‘ಕೆಂಚ’ನಾಗಿ ದರ್ಶನ್ ಅಬ್ಬರಿಸಿದ ರೀತಿ ಅವರ ಇಮೇಜನ್ನೇ ಬದಲಾಯಿಸಿತು. ಮಾಸ್ ಆಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಮತ್ತು ಕಾಮಿಡಿ ಮಿಶ್ರಣವಿದ್ದ ಈ ಸಿನಿಮಾ ಅಂದು ಬರೋಬ್ಬರಿ 35 ವಾರಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು.
“ಅಂದಿನ ಕಾಲಕ್ಕೆ ಈ ಸಿನಿಮಾ ಸುಮಾರು 18 ರಿಂದ 22 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು” ಎಂದು ನಿರ್ದೇಶಕ ಓಂ ಪ್ರಕಾಶ್ ರಾವ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ಸಾಧು ಕೋಕಿಲ ಮತ್ತು ರಾಮ್‌ನಾರಾಯಣ್ ಸಂಗೀತ ನೀಡಿದ್ದ ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಸೂಪರ್ ಹಿಟ್. ಒಟ್ಟಿನಲ್ಲಿ ಥಿಯೇಟರ್‌ಗಳಲ್ಲಿ ಮತ್ತೆ ಮಾಸ್ ಹವಾ ಸೃಷ್ಟಿಸಲು ‘ಕಲಾಸಿಪಾಳ್ಯ’ ಸಜ್ಜಾಗಿದ್ದು, ಡಿ-ಬಾಸ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

Leave a Comment